ಕೃಷಿ ಕಾರ್ಮಿಕರು

ವ್ಯವಸಾಯದ ವಿಶಿಷ್ಟ ಸಮಸ್ಯೆಗಳ ಪೈಕಿ ಕೃಷಿ ಕಾರ್ಮಿಕರ ಸಮಸ್ಯೆ ಪ್ರಧಾನವಾದ್ದು. ಇದು ಇತರ ಉದ್ಯೋಗಗಳಲ್ಲಿಯ ಕಾರ್ಮಿಕ ಸಮಸ್ಯೆಗಳಿಗಿಂತಲೂ ಪ್ರಧಾನವಾದದ್ದು.  ಇದು ಇತರ ಉದ್ಯೋಗಗಳಲ್ಲಿಯ ಕಾರ್ಮಿಕರ ಸಮಸ್ಯೆಗಿಂತ ಭಿನ್ನವಾದ್ದು. ವಿಶ್ವದ ಜನಸಂಖ್ಯೆಯ ಹೆಚ್ಚಿನ ಭಾಗ ಕೃಷಿಸಂಬಂಧವಾದ ದುಡಿಮೆಯಲ್ಲಿ ನಿರತವಾಗಿದೆ. ಕೈಗಾರಿಕಾ ಉತ್ಪನ್ನಗಳಿಗೆ ಇರುವ ಬೇಡಿಕೆಯಲ್ಲಿ ಶೇಕಡ 80 ರಷ್ಟು ವ್ಯವಸಾಯದಲ್ಲಿ ನಿರತರಾಗಿರುವವವರಿಂದಲೇ ಬರುತ್ತದೆ.

	ಮಾನವ ನಾಗರಿಕತೆಯ ದೀರ್ಘ ಇತಿಹಾಸದಲ್ಲಿ ಕೃಷಿ ಕಾರ್ಮಿಕರ ಸ್ಥಾನಮಾನಗಳಲ್ಲಿ ಆಗಿರುವ ಬದಲಾವಣೆ ಮುಖ್ಯವಾದ್ದು. ಈಜಿಪ್ಟ್, ಪರ್ಷಿಯ, ರೋಂ ಮುಂತಾದವುಗಳ ಪುರಾತನ ನಾಗರಿಕತೆಗಳಲ್ಲಿ ಗುಲಾಮರ ದುಡಿಮೆಯೇ ಪ್ರಧಾನವಾಗಿತ್ತು. ಅನಂತರ ಈ ಪದ್ಧತಿ ಬದಲಾಯಿತು. ಊಳಿಗಮಾನ್ಯ ಪದ್ಧತಿಯಲ್ಲಿ ದುಡಿಮೆಗಾರರು ಜಮೀನ್ದಾರನಿಂದ ಭೂಮಿಯನ್ನು ಸಾಗುವಳಿಗೆ ಪಡೆದು ಅದಕ್ಕೆ ಪ್ರತಿಫಲವಾಗಿ ಆತನ ಭೂಮಿಯಲ್ಲಿ ಹಲವು ನಿಯಮಗಳಿಗೆ ಅನುಸಾರವಾಗಿ ಕೆಲಸ ಮಾಡುತ್ತಿದ್ದರು. ಇವರು ಗುಲಾಮರಂತೆ ಸಂಪೂರ್ಣವಾಗಿ ತಮ್ಮ ವ್ಯಕ್ತಿತ್ವನ್ನು ಕಳೆದುಕೊಂಡಿರದಿದ್ದರೂ, ಈಗಿನ ಬೇಸಾಯಗಾರರಂತೆ ಇವರಿಗೆ ವ್ಯಕ್ತಿಸ್ವಾತಂತ್ರ್ಯ ಇರಲಿಲ್ಲ. ಕಾಲಕ್ರಮದಲ್ಲಿ ಊಳಿಗಮಾನ್ಯ ಪದ್ಧತಿ ಕ್ಷೀಣಿಸಿ ಬೇಸಾಯ ಕೆಲಸಗಾರರು ಇತರ ಆರ್ಥಿಕ ಉದ್ಯಮಗಳಲ್ಲಿಯ ಕಾರ್ಮಿಕರಂತೆಯೇ ಒಂದು ಗೊತ್ತಾದ ಅವಧಿಯಲ್ಲಿ ಒಂದು ನಿರ್ದಿಷ್ಟ ಕೂಲಿಗಾಗಿ ಕೆಲಸ ಮಾಡವಂತಾಯಿತು. 

	ಇಂದು ವ್ಯವಸಾಯ ಕ್ಷೇತ್ರದಲ್ಲಿ ಕಾರ್ಯನಿರತರಾಗಿರುವವರನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು: 1. ಸಾಗುವಳಿಯ ಜಮೀನಿನಲ್ಲಿ ನೇರವಾಗಿ ಕಾರ್ಯನಿರತರಾಗಿರುವವರು. ಇವರು ಭೂಮಿಯ ಮಾಲೀಕರಾಗಿರಬಹುದು ಅಥವಾ ಗೇಣಿದಾರರಾಗಿರಬಹುದು. 2. ವಾರದಾರರು (ಕ್ರಾಪ್ ಷೇರರ್ಸ್) ಪ್ರಪಂಚದ ಅನೇಕ ಕಡೆಗಳಲ್ಲಿ ಭೂಮಿಯನ್ನು ಲಾವಣಿಗೆ ಪಡೆದಿರುವ ವ್ಯವಸಾಯಗಾರರು ಮಾಲೀಕರೊಡನೆ ಆ ಭೂಮಿಯ ಉತ್ಪನ್ನದಲ್ಲಿ ಪಾಲುಗೊಳ್ಳುತ್ತಾರೆ. 3. ಒಂದು ಗೊತ್ತಾದ ಕೂಲಿಗಾಗಿ ಇತರರ ಜಮೀನಿನಲ್ಲಿ ಕೆಲಸ ಮಾಡುವವರು. ಈ ಗುಂಪಿಗೆ ಸೇರಿದವರ ಜೀವನದ ಸಮಸ್ಯೆ ಇಂದು ಅನೇಕ ರಾಷ್ಟ್ರಗಳಲ್ಲಿ ಹೆಚ್ಚಿನ ಪ್ರಾಮುಖ್ಯ ಪಡೆದಿದೆ.

	ಕೈಗಾರಿಕೆಯಲ್ಲಿ ಮುಂದುವರಿದ ದೇಶಗಳಲ್ಲಿ ಕೃಷಿಯಲ್ಲಿ ನಿರತರಾದವರ ಸಂಖ್ಯೆ ಶೇಕಡ 10ಕ್ಕಿಂತ ಕಡಿಮೆ. ಅಭಿವೃದ್ಧಿಶೀಲ ದೇಶಗಳಲ್ಲಿ ಅಲ್ಲಿಯ ಜನಸಂಖ್ಯೆಯ ಶೇಕಡ 60ಕ್ಕೂ ಹೆಚ್ಚು ಮಂದಿ ವ್ಯವಸಾಯವನ್ನೆ ಅವಲಂಬಿಸಿರುತ್ತಾರೆ. ಎಲ್ಲ ದೇಶಗಳಲ್ಲೂ ಭೂಮಾಲೀಕರ ಸಂಖ್ಯೆಗಿಂತಲೂ ವ್ಯವಸಾಯ ಕೆಲಸಗಾರರ ಸಂಖ್ಯೆ ಹೆಚ್ಚಾಗಿದೆ. ಭಾರತದಲ್ಲಿ ವ್ಯವಸಾಯದಲ್ಲಿ ನಿರತರಾಗಿರುವ ಜನರಲ್ಲಿ ಶೇ. 30 ಕ್ಕಿಂತಲೂ ಹೆಚ್ಚು ಮಂದಿ ಕೂಲಿಗಾಗಿ ಕೆಲಸಮಾಡುವ ಭೂರಹಿತ ಶ್ರಮಜೀವಿಗಳಾಗಿದ್ದಾರೆ. ಇವರು ವರ್ಷದ ಕೆಲವು ತಿಂಗಳುಗಳಲ್ಲಿ ಇತರರ ಜಮೀನಿನಲ್ಲಿ ಕೂಲಿಗಾಗಿ ಕೆಲಸ ಮಾಡುತ್ತಾರೆ. ಇಂಥವರಲ್ಲಿ ಪುರುಷರ ಸಂಖ್ಯೆಗಿಂತಲೂ ಸ್ತ್ರೀಯರ ಮತ್ತು ಮಕ್ಕಳ ಸಂಖ್ಯೆ ಹೆಚ್ಚು. 

	ಏಷ್ಯನ್ ದೇಶಗಳ ಸಣ್ಣ ಜಮೀನಿನ ಒಡೆಯರು ಕೂಡ ತಮ್ಮ ಆದಾಯದ ಕೊರತೆಯನ್ನು ತುಂಬಿಸಲು ಇತರರ ಜಮೀನಿನಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಾರೆ. ಮತ್ತೆ ಹಲವು ದೇಶಗಳ ನಗರಗಳಲ್ಲಿ ಅಥವಾ ಗ್ರಾಮ ಪ್ರದೇಶಗಳಲ್ಲಿ ಬೇರೆ ಉದ್ಯೋಗಗಳಲ್ಲಿರುವವರೂ ವ್ಯವಸಾಯರಂಗದಲ್ಲಿ ಕೆಲಸದ ಒತ್ತಡ ಹೆಚ್ಚಾಗಿರುವ ಕಾಲದಲ್ಲಿ ಕೂಲಿಗಾಗಿ ತಾತ್ಕಾಲಿಕ ಕೆಲಸ ಮಾಡುತ್ತಾರೆ.

	ಆರ್ಥಿಕವಾಗಿ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ವ್ಯವಸಾಯನಿರತರ ಪ್ರಮಾಣ ಏಕಪ್ರಕಾರವಾಗಿ ಕ್ಷೀಣಿಸುತ್ತಿದೆ. ಬೇಸಾಯ ಕೆಲಸಗಾರರ ಕೊರತೆಯನ್ನು ತುಂಬಿಸಲು ಅವರನ್ನು ಹೆಚ್ಚು ದಕ್ಷತೆಯಿಂದ ಉಪಯೋಗಿಸಿಕೊಳ್ಳಬೇಕಾದ ಅವಶ್ಯಕತೆ ತಲೆದೋರಿದೆ. ಎಷ್ಟೋ ಸನ್ನಿವೇಶಗಳಲ್ಲಿ ಗ್ರಾಮ ಪ್ರದೇಶದ ಜನ ಊರುಗಳಿಗೂ ನಗರಗಳಿಗೂ ವಲಸೆ ಹೋದುದರ ಪರಿಣಾಮವಾಗಿ ಗ್ರಾಮ ಸಮಾಜ ಯುವಕ ಉತ್ಸಾಹೀ ಕೃಷಿ ಜನಾಂಗವನ್ನು ಕಳೆದುಕೊಂಡಿದೆ. ಬೇಸಾಯದ ಕೆಲಸಗಾರರು ವ್ಯವಸಾಯ ಕ್ಷೇತ್ರದಿಂದ ಹೊರಬೀಳುವುದು ಸ್ವಾಭಾವಿಕವಾದ ಬೆಳವಣಿಗೆಯಾದರೂ ಇದಕ್ಕೆ ಮತ್ತೆ ಕೆಲವು ಕಾರಣಗಳೂ ಇವೆ: 1. ಕೃಷಿ ಕೆಲಸಗಾರರು ವಾಸಿಸುವ ಆಕರ್ಷಕವಲ್ಲದ ಸನ್ನಿವೇಶ, 2. ಅವರ ಕೆಲಸದ ಅಸಮರ್ಪಕ ಸ್ಥಿತಿ, 3. ಅಸಮಂಜಸವಾದ ಕೂಲಿಯ ದರ. 

	ಸಾಧಾರಣವಾಗಿ ಕೂಲಿಕೆಲಸ ಮಾಡುವ ಬೇಸಾಯ ಕಾರ್ಮಿಕರಿಗೆ ಇತರ ಉದ್ಯಮಗಳಲ್ಲಿಯ ಕೆಲಸಗಾರರಷ್ಟು ಅನುಕೂಲವಾದ ಜೀವನಸ್ಥಿತಿಗತಿಗಳಾಗಲಿ ಕೆಲಸದ ಸನ್ನಿವೇಶವಾಗಲಿ ಕೂಲಿಯ ದರವಾಗಲಿ ಇಲ್ಲ. ಏಕೆಂದರೆ, ಬೇಸಾಯಕೆಲಸಗಾರರ ಉತ್ಪದಾನ ಶಕ್ತಿ ಕಡಿಮೆಯಾಗಿರುವುದರಿಂದ ಅವರಿಗೆ ಭೂ ಮಾಲೀಕರು ಹೆಚ್ಚಿನ ವೇತನವನ್ನಾಗಲಿ ಜೀವನದ ಉತ್ತಮ ಸನ್ನಿವೇಶವನ್ನಾಗಲಿ ಒದಗಿಸುವ ಸಂಭವ ಕಡಿಮೆ. ವ್ಯವಸಾಯ ಕೆಲಸಗಾರರು ಸಾಮಾನ್ಯವಾಗಿ ಒಂದೇಕಡೆ ಕೇಂದ್ರೀಕೃತವಾಗಿರದೆ ವಿಶಾಲವಾದ ಪ್ರದೇಶಗಳಲ್ಲಿ ಚದುರಿಹೋಗಿರುವುದರಿಂದ ಅವರಲ್ಲಿ ಸಂಘಟನ ಶಕ್ತಿ ಕಡಿಮೆ. ಹೀಗೆ ಬೇಸಾಯ ಕೆಲಸಗಾರರ ಸಂಘಗಳು ಅತಿ ವಿರಳ. ಅವರಲ್ಲನೇಕರು ಅವಿದ್ಯಾವಂತರು. ಈ ಕಾರಣಗಳಿಂದಾಗಿ ವ್ಯವಸಾಯ ಕಾರ್ಮಿಕರಲ್ಲಿ ದೀರ್ಘವಾದ ಕೆಲಸದ ಅವಧಿ, ಹಿತಕರವಲ್ಲದ ಜೀವನದ ಸನ್ನಿವೇಶ, ಕಡಿಮೆಮಟ್ಟದ ಕೂಲಿ, ಸಾಂಸ್ಕøತಿಕ ಮತ್ತು ಮನೋರಂಜನೆ ಚಟುವಟಿಕೆಗಳ ಅಭಾವ-ಮುಂತಾದ ಅನೇಕ ಕೊರತೆಗಳಿವೆ.

	ಕೃಷಿ ಕಾರ್ಮಿಕರು ಹಣದ ರೂಪದಲ್ಲಿ ಪಡೆಯುವ ಕೂಲಿಯ ಜೊತೆಗೆ ಸರಕುಗಳ ಅಥವಾ ಇತರ ಸೌಲಭ್ಯಗಳ ರೂಪದಲ್ಲಿ ಪಡೆಯುವ ಕೂಲಿಯನ್ನೂ ಪರಿಗಣಿಸಬೇಕು. ಹಿಂದುಳಿದ ರಾಷ್ಟ್ರಗಳಲ್ಲಿ ಅವರ ಕೂಲಿಯ ಹೆಚ್ಚಿನ ಅಂಶ ಈ ರೀತಿಯ ಸರಕುಗಳ ರೂಪದಲ್ಲೇ ಇರುತ್ತದೆ. ಅವರಿಗೆ ದೊರೆಯುವ ಉಚಿತ ವಸತಿ ಸೌಕರ್ಯ, ಕಡಿಮೆ ದರದಲ್ಲಿ ಆಹಾರ ಸಾಮಗ್ರಿಗಳ ಸರಬರಾಜು, ಬಟ್ಟೆ ಬರೆಯ ಪೂರೈಕೆ-ಇವೆಲ್ಲ ಅವರ ಕೂಲಿಯ ಅಂಶಗಳಾಗಿರುತ್ತವೆ. ಈ ರೀತಿಯಾಗಿ ವಸ್ತು ಸೇವೆಗಳ ರೂಪದ ಕೂಲಿಯನ್ನು ಪರಿಗಣಿಸಿದರೂ ಬೇಸಾಯ ಕೆಲಸಗಾರರ ಒಟ್ಟು ಕೂಲಿ ಇತರ ಉದ್ಯಮಗಳ ಕೂಲಿಯ ಮಟ್ಟಕ್ಕಿಂತ ಕಡಿಮೆಯಾಗಿಯೇ ಇರುತ್ತದೆ.

	ಭಾರತದಲ್ಲಿ ಭೂರಹಿತ ಕೂಲಿಗಾರರ ಸಂಖ್ಯೆ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ವ್ಯವಸಾಯರಂಗದಲ್ಲಿ ಕೂಲಿಯ ಮಟ್ಟ ಇಳಿದಿರುವುದಲ್ಲದೆ ವರ್ಷದಲ್ಲಿ ಕೆಲಸ ಇಲ್ಲದಿರುವ ದಿನಗಳಸಂಖ್ಯೆ ಹೆಚ್ಚುತ್ತಿದೆ. ಚೆಹಲ, ಅಜ್ಮೀರ್, ಸೌರಾಷ್ಟ್ರ ಮುಂತಾದ ಕೆಲವು ಪ್ರದೇಶಗಳಲ್ಲಿ ಮಾತ್ರ ಬೇಸಾಯ ಕೆಲಸಗಾರರ ಪ್ರಮಾಣ ಇತರ ಉದ್ಯಮಗಳ ಕೆಲಸಗಾರರ ಪ್ರಮಾಣಕ್ಕಿಂತ ಕಡಿಮೆಯಾಗಿದೆ.  ಮಿಕ್ಕ ಕಡೆಗಳಲ್ಲೆಲ್ಲ ಕೈಗಾರಿಕೆಯಲ್ಲಿ ಬಹಳ ಮುಂದುವರಿದಿರುವ ಮಹಾರಾಷ್ಟ್ರ ಮತ್ತು ಬಂಗಾಲ ಪ್ರದೇಶಗಳಲ್ಲಿ ಕೂಡ ವ್ಯವಸಾಯ ಕೆಲಸಗಾರರ ಪ್ರಮಾಣವೇ ಹೆಚ್ಚು. ಹಿಮಾಚಲ ಪ್ರದೇಶಗಳಲ್ಲಿಯಂತೂ ಶೇ. 90 ರಷ್ಟು ಮಂದಿ ಕೃಷಿ ಕಾರ್ಮಿಕರಿದ್ದಾರೆ. ಇತ್ತೀಚಿಗೆ ಭಾರತದಲ್ಲಿ ಕೃಷಿಕಾರ್ಮಿಕರ ಸಮಸ್ಯೆಗೆ ಸರ್ಕಾರ ಹೆಚ್ಚಿನ ಗಮನ ನೀಡುತ್ತಿದೆ.

	ಭಾರತದ ಕೃಷಿ ಕೆಲಸಗಾರರಲ್ಲಿ ಮೂರು ವಿಧಗಳುಂಟು: 1. ಕೃಷಿ ಕಾರ್ಮಿಕರು: ಉಳುವುದೇ ಮುಂತಾದ ಕೆಲಸಗಳಲ್ಲಿ ಪ್ರತ್ಯಕ್ಷವಾಗಿನಿರತರಾಗಿರುವವರು. 2. ಅಕುಶಲ ಕಾರ್ಮಿಕರು: ಬಾವಿತೋಡುವುದು, ಬೇಲಿ ಕಟ್ಟುವುದು, ಮುಂತಾದ ಕೆಲಸ ಮಾಡುವವರು. 3. ಕುಶಲ ಕಾರ್ಮಿಕರು: ಬಡಗಿಗಳು, ಲೋಹದ ಕೆಲಸ ಮಾಡುವವರು, ಇತ್ಯಾದಿ. ಇವರಲ್ಲದೆ ಅಲ್ಪಸ್ವಲ್ಪ ಜಮೀನು ಹೊಂದಿದ್ದು ಆಗಾಗ್ಯೆ ಇತರರ ಭೂಮಿಗಳಲ್ಲಿ ಕೆಲಸ ಮಾಡುವವರೂ ಸೇರಿದ್ದಾರೆ.

	1947ರ ಅನಂತರ ಭಾರತದ ರಾಷ್ಟ್ರೀಯ ಸರ್ಕಾರ ಕೃಷಿ ಕಾರ್ಮಿಕರಸ್ಥಿತಿಯನ್ನು ಉತ್ತಮಪಡಿಸಲು ಅನೇಕ ಪ್ರಯತ್ನಗಳನ್ನು ಕೈಗೊಂಡಿದೆ. 1948ರಲ್ಲಿಯೇ ಕನಿಷ್ಠ ಕೂಲಿ ಕಾಯಿದೆ ಜಾರಿಗೆ ಬಂತಾದರೂ ಇದನ್ನು ವಾಸ್ತವವಾಗಿ ಕಾರ್ಯ ರೂಪಕ್ಕೆ ತರಲು ಅನೇಕ ಅಡಚಣೆಗಳಿದ್ದವು. ಭಾರತದ ಪಂಚವಾರ್ಷಿಕ ಯೋಜನೆಗಳು ಆರಂಭವಾದ ಮೇಲೆ ಬೇಸಾಯ ಕೆಲಸಗಾರರ ಸಮಸ್ಯೆ ಮತ್ತು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಅವರ ಸ್ಥಾನದ ಕಡೆಗೆ ಹೆಚ್ಚಿನ ಗಮನ ಕೊಡಲಾಗಿದೆ. 1950-51ರಲ್ಲಿ ಭಾರತ ಸರ್ಕಾರ ಕೃಷಿಕಾರ್ಮಿಕರ ಸ್ಥಿತಿಗತಿಗಳನ್ನು ಕುರಿತ ವಿಚಾರಣಾ ಆಯೋಗವನ್ನು ನೇಮಿಸಿತು. ಪುನಃ 1956-57ರಲ್ಲಿ ಎರಡನೆಯ ಬಾರಿ ವಿಚಾರಣೆ ನಡೆಸಲಾಯಿತು. ಈ ಆಯೋಗಗಳ ವರದಿಗಳ ಪ್ರಕಾರ ದೇಶದಲ್ಲಿರುವ ಹಳ್ಳಿಯ ಕುಟುಂಬಗಳಲ್ಲಿ ಶೇ. 30 ರಷ್ಟು ಕೃಷಿ ಕಾರ್ಮಿಕರ ಕುಟುಂಬಗಳೆಂದು ಅಂದಾಜು ಮಾಡಲಾಗಿದೆ. ಇವರಲ್ಲಿ ಅರ್ಧಾಂಶ ಜನರಿಗೆ ಭೂಮಿ ಇರುವುದಿಲ್ಲ. ಉಳಿದವರ ಸ್ವಾಧೀನದಲ್ಲಿ ಸ್ವಲ್ಪ ಭೂಮಿ ಇರುತ್ತದೆ. ದೇಶದಲ್ಲಿ 163 ಲಕ್ಷ ಬೇಸಾಯಗಾರ ಕುಟುಂಬಗಳಿವೆಯೆಂದು ಈ ವರದಿಗಳಿಂದ ತಿಳಿದು ಬಂದಿದೆ. ಅವರಲ್ಲಿ ಶೇಕಡ 83 ರಷ್ಟು ಜನ ದಿನಗೂಲಿಗೆ ಹಂಗಾಮಿಯಾಗಿ ಕೆಲಸಕ್ಕೆ ನೇಮಕವಾಗುವವರು. ಉಳಿದವರು ಒಂದು ಗೊತ್ತಾದ ಅವಧಿಯವರೆಗೆ ಕರಾರಿನ ಮೇರೆಗೆ ಕೆಲಸಕ್ಕೆ ನೇಮಕವಾಗಿರುವವರು.

	ಎರಡನೆಯ ಆಯೋಗದ ವಿವರಣೆಯ ಪ್ರಕಾರ ಕೃಷಿ ಕಾರ್ಮಿಕರ ಕುಟುಂಬ ಎಂದರೆ ವ್ಯವಸಾಯದಿಂದ ಬರುವ ಕೂಲಿಯೇ ಪ್ರಮುಖ ಆದಾಯವಾಗಿರುವ ಕುಟುಂಬ. 1956-57ರಲ್ಲಿ ಭಾರತದಲ್ಲಿ ಸುಮಾರು 330 ಲಕ್ಷ ಕೃಷಿ ಕಾರ್ಮಿಕರಿದ್ದರು. ಇವರಲ್ಲಿ 180 ಲಕ್ಷ ಪುರುಷರು, 120 ಲಕ್ಷ ಮಹಿಳೆಯರು ಮತ್ತು 30 ಲಕ್ಷ ಜನ ಮಕ್ಕಳು. ಹಂಗಾಮಿಯಾಗಿ ಕೆಲಸ ಮಾಡುವ ಪುರುಷರಿಗೆ ವರ್ಷದಲ್ಲಿ 128 ದಿನಗಳು ಕೆಲಸವಿರುವುದಿಲ್ಲ. ಈ ಕೆಲಸಗಾರರ ದಿನಗೂಲಿ 1956ರಲ್ಲಿ ಸರಾಸರಿ 96 ಪೈಸೆಯಾಗಿತ್ತು. ಈ ಕೂಲಿಯಲ್ಲಿ ಶೇ. 40 ರಷ್ಟು ಸರಕುಗಳ ರೂಪದಲ್ಲಿ ಸಂದಾಯವಾಗುತ್ತಿತ್ತು. 1950-56ರ ಅವಧಿಯಲ್ಲಿ ಕೃಷಿ ಕಾರ್ಮಿಕರ ಕೂಲಿಯ ಮಟ್ಟ ಇಳಿದಿತ್ತು. ಹಣ ರೂಪದ ಕೂಲಿಗಿಂತಲೂ ಸರಕಿನ ರೂಪದ ಕೂಲಿಗೆ ಹೆಚ್ಚಿನ ಪ್ರಾಮುಖ್ಯ ಉಂಟಾಯಿತು, ಕಾರ್ಮಿಕ ಕುಟುಂಬದ ವಾರ್ಷಿಕಾದಾಯ 1950-51ರಲ್ಲಿ ರೂ. 447 ಇದ್ದದ್ದು, 1956-57ರಲ್ಲಿ ರೂ. 437ಕ್ಕೆ ಕಡಿಮೆಯಾಗಿತ್ತು. ಹಾಗೆಯೇ ತಲಾ ವರಮಾನ ರೂ. 140 ರಿಂದ ರೂ. 99.4ಕ್ಕೆ ಇಳಿದಿತ್ತು.

	ಭೂ ರಹಿತ ಕಾರ್ಮಿಕರಲ್ಲಿ ಬಹುಪಾಲು ಜನ ಹಿಂದುಳಿದ ಪಂಗಡಕ್ಕೆ ಸೇರಿದವರು. 1950ರಲ್ಲಿಯೇ ಭಾರತದ ಭೂ ವ್ಯವಸಾಯ ಸುಧಾರಣಾ ಸಮಿತಿ ರಚಿಸಿದಂತೆ ಭಾರತದ ವ್ಯವಸಾಯ ಸುಧಾರಿಸಬೇಕಾದರೆ ಹಿಂದುಳಿದ ಪಂಗಡಕ್ಕೆ ಸೇರಿದ ಕೃಷಿಕಾರ್ಮಿಕರ ಸಮಸ್ಯೆ ಅಗತ್ಯವಾಗಿ ಸುಧಾರಿಸಬೇಕು. ವಂಶಪಾರಂಪರ್ಯವಾಗಿ ಅವರು ಅನುಸರಿಸುತ್ತ ಬಂದಿರುವ ಉದ್ಯೋಗ, ಭೂ ಹಿಡುವಳಿಯ ಪದ್ಧತಿ, ಗೇಣಿಯ ಸೌಲಭ್ಯ-ಮುಂತಾದ ಅಂಶಗಳಿಗೆ ಅನುಗುಣವಾಗಿಇವರ ಆರ್ಥಿಕ ಸಾಮಾಜಿಕ ಸ್ಥಾನಮಾನಗಳ ನಿಷ್ಕರ್ಷೆಯಾಗಿದೆ.

	ಕೃಷಿಕಾರ್ಮಿಕರ ವಿಚಾರಣಾ ಆಯೋಗದ ಸಲಹೆಗಳನ್ನು ಕಾರ್ಯರೂಪಕ್ಕೆ ತರಲು ಭಾರತದ ಎರಡನೆಯ ಮತ್ತು ಮೂರನೆಯ ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ಅನೇಕ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಆಯೋಗದ ವರದಿಗಳ ಆಧಾರದ ಮೇಲೆ ಕೇರಳ, ಪಂಜಾಬ್, ಒರಿಸ್ಸ, ರಾಜಸ್ಥಾನ, ಅಜ್ಮೀರ್, ದೆಹಲಿ, ತ್ರಿಪುರ, ಕಚ್ ಮತ್ತು ಕೊಡಗು ಪ್ರದೇಶಗಳಲ್ಲಿಯೂ ಅಸ್ಸಾಮ್, ಆಂಧ್ರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮೈಸೂರು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿಯೂ ಕನಿಷ್ಠಮಟ್ಟದ ವೇತನವನ್ನು ಜಾರಿಗೆ ತರಲಾಗಿದೆ. ಕೃಷಿ ಕಾರ್ಮಿಕರನ್ನು ಯಾವುದೇ ರೀತಿಯ ಜೀತ ಪದ್ಧತಿಗೆ ಗುರಿ ಮಾಡುವುದು ಕಾನೂನು ಬಾಹಿರವಾದ, ಶಿಕ್ಷಾರ್ಹವಾದ, ಗುರುತರ ಅಪರಾಧವೆಂದು ರಾಷ್ಟ್ರ ಸಂವಿಧಾನ ಘೋಷಿಸಿದೆ.

	ಕೃಷಿಕಾರ್ಮಿಕರಿಗೆ ಸರಿಯಾದ ಉದ್ಯೋಗಾವಕಾಶ ದೊರೆತು ಅವರ ಸ್ಥಿತಿ ಉತ್ತಮಗೊಳ್ಳದ ಹೊರತು ದೇಶದಲ್ಲಿ ಯೋಜನಾನುಗುಣವಾದ ಪ್ರಗತಿ ಸಾಧ್ಯವಿಲ್ಲವೆಂದು ಭಾರತದ ಯೋಜನಾ ಆಯೋಗ ಸೂಚಿಸಿದೆ. ಇದರ ಪರಿಣಾಮವಾಗಿ ಪಂಚ ವಾರ್ಷಿಕಯೋಜನೆಗಳ ಅಡಿಯಲ್ಲಿ ಕೃಷಿ ಕಾರ್ಮಿಕರ ಕುಂದುಕೊರತೆಗಳನ್ನು ನಿವಾರಿಸಲು ಅನೇಕ ಕ್ರಮಗಳನ್ನು ಜಾರಿಗೆ ತರಲಾಗಿದೆ: 1. ವ್ಯವಸಾಯ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಪಶುಸಂಗೋಪನೆಯ ಯೋಜನೆಗಳು; 2. ಗ್ರಾಮಕೈಗಾರಿಕೆ, ಗೃಹಕೈಗಾರಿಕೆ ಮತ್ತು ಸಣ್ಣ ಗಾತ್ರದ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಿ ಕೃಷಿಕಾರ್ಮಿಕರಿಗೆ ಹೆಚ್ಚಿನ ಉದ್ಯೋಗಾವಕಾಶದ ಕಲ್ಪನೆ ; 3. ಭೂಮಿಯ ಹಂಚುವಿಕೆ, ಶಿಕ್ಷಣಾವಕಾಶ ಇವುಗಳಿಂದ ಅವರ ಸಾಮಾಜಿಕ ಸ್ಥಾನಮಾನಗಳನ್ನು ಹೆಚ್ಚಿಸಿ ಅವರಲ್ಲಿ ಆತ್ಮವಿಕಾಸ, ಕಾರ್ಯಾಸಕ್ತಿ ಮತ್ತು ಸಾಮಥ್ರ್ಯ ಉಂಟಾಗುವಂತೆ ಮಾಡುವುದು; 4. ಗ್ರಾಮ ಪುನರುಜ್ಜೀವನ ಕಾರ್ಯಗಳಿಗಾಗಿ ಮೀಸಲಾಗಿರುವ ಹಣದಲ್ಲಿ ಅಧಿಕಾಂಶವನ್ನು ಅವರ ಜೀವನದ ಪರಿಸ್ಥಿತಿಯನ್ನು ಸುಧಾರಿಸಲು ಉಪಯೋಗಿಸುವುದು.

	ಒಂದನೆಯ ಯೋಜನೆಯ ಅವಧಿಯಲಿ ಸುಮಾರು ರೂ. 1.5 ಕೋಟಿಯನ್ನು ಭೂರಹಿತ ಕಾರ್ಮಿಕರಿಗೆ ಭೂಮಿಯನ್ನು ಒದಗಿಸಲು ಉಪಯೋಗಿಸಲಾಯಿತು ಮತ್ತು ರೂ. 32 ಕೋಟಿಯನ್ನು ಹಿಂದುಳಿದ ಪಂಗಡದ ಕೃಷಿ ಕಾರ್ಮಿಕರ ಕ್ಷೇಮಾಭ್ಯುದಯಕ್ಕಾಗಿ ಉಪಯೋಗಿಸಲಯಿತು. ಎರಡನೆಯ ಯೋಜನೆಯ ಅವಧಿಯಲ್ಲಿ 20,000 ಕೃಷಿಕ ಕುಟುಂಬಗಳನ್ನು 1 ಲಕ್ಷ ಎಕರೆ ಭೂಮಿಯಲ್ಲಿ ನೆಲಸುವಂತೆ ಮಾಡಲು ಸೌಕರ್ಯಗಳನ್ನು ಕಲ್ಪಿಸಲು ಸುಮಾರು 5 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಯಿತು. ಮತ್ತು 90ಕೋಟಿ ರೂ.ಗಳನ್ನು ಹಿಂದುಳಿದ ಪಂಗಡದ ಬೇಸಾಯ ಕೆಲಸಗಾರರ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗಾಗಿ ವಿನಿಯೋಗಿಸಲಾಯಿತು. ಮೂರನೆಯ ಯೋಜನೆಯ ಅವಧಿಯಲ್ಲಿ ಹೆಚ್ಚಿನ ವ್ಯವಸಾಯ ಪ್ರಗತಿಯನ್ನು ಸಾಧಿಸುವುದರ ಮೂಲಕ ಬೇಸಾಯ ಕೆಲಸಗಾರರ ಸ್ಥಿತಿಯನ್ನು ಉತ್ತಮ ಪಡಿಸುವ ಉದ್ದೇಶವಿತ್ತು. ಭೂ ಸುಧಾರಣೆ ಹಾಗೂ ಉದ್ಯೋಗ ಪ್ರಧಾನ ಕಾರ್ಯಕ್ರಮಗಳ ರೂಪಣೆ- ಈ ಎರಡೂ ದಿಕ್ಕುಗಳಲ್ಲಿ ನಾಲ್ಕನೆಯ ಯೋಜನೆಯಲ್ಲಿ ಕ್ರಮಗಳನ್ನು ಸೂಚಿಸಲಾಗಿದೆ. ಭೂ ಸುಧಾರಣೆಗೂ ಭೂ ರಹಿತ ಕೃಷಿ ಕಾರ್ಮಿಕರ ಜೀವನ ಸ್ಥಿತಿಗತಿಗಳ ಸುಧಾರಣೆಗೂ ನೇರ ಸಂಬಂಧವುಂಟೆಂಬುದನ್ನು ಯೋಜನೆಯಲ್ಲಿ ಗಮನಿಸಲಾಗಿದೆ. ಪಾಳು ನೆಲ ವರ್ಗೀಕರಣ ಮತ್ತು ಭೂಹೀನರಲ್ಲಿ ಅದರ ಹಂಚಿಕೆ,  ಅವರಿಗೆ ಜಮೀನು ನೀಡುವುದರ ಜೊತೆಗೆ ಉದ್ದರಿ ಮುಂತಾದ ಸೌಲಭ್ಯಗಳ ನೀಡಿಕೆ, ಗೇಣಿ ಸುಧಾರಣೆ, ಸಾಂದ್ರ ಬೇಸಾಯ-ಇವುಗಳಿಂದ ಕೃಷಿ ಕಾರ್ಮಿಕರ ಉದ್ಯೋಗ ಸ್ಥಿತಿಗತಿಗಳು ಉತ್ತಮಗೊಳ್ಳುತ್ತಿವೆ. ಇರುವಷ್ಟೇ ನೆಲಕ್ಕಾಗಿ ಕೃಷಿ ಕಾರ್ಮಿಕರಲ್ಲೇ ಸ್ಪರ್ಧೆ ಹೆಚ್ಚದಂತೆ ಕ್ರಮ ಕೈಗೊಳ್ಳುವುದರಿಂದ ಗೇಣಿದಾರರ ಮತ್ತು ವಾರಸುಗಾರರ ಭದ್ರತೆ ಸಾಧಿಸಬಹುದಾಗಿದೆ. ಕೃಷಿ ಕಾರ್ಮಿಕರಿಗೆ ಬೇರೆ ಉದ್ಯೋಗಾವಕಾಶಗಳನ್ನು ನಿರ್ಮಿಸುವುದು ನಾಲ್ಕನೆಯ ಯೋಜನೆಯ ಇನ್ನೊಂದು ಪರಿಹಾರ. ಕೃಷಿಯ ಚೌಕಟ್ಟಿಗೇ ಹೊಂದಿಕೊಂಡಂತೆ ಅನೇಕ ಉದ್ಯೋಗಗಳನ್ನು ಬೆಳೆಸಲು ದೇಶದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಇವಕ್ಕೆ ಸಾಂಸ್ಥಿಕ ಉದ್ದರಿ ದೊರಕುವುದು ಕಷ್ಟವಾದ್ದರಿಂದ ಸರ್ಕಾರವೇ ಈ ಕಾರ್ಯಕ್ರಮಗಳಿಗೆ ನೆರವು ನೀಡಲು ಕ್ರಮ ಕೈಕೊಂಡಿದೆ.

	1951ರಲ್ಲಿ ಆಚಾರ್ಯ ವಿನೋಬಾ ಭಾವೆಯವರು ಆರಂಭಿಸಿದ ಭೂದಾನ ಚಳವಳಿಯೂ ಭೂರಹಿತ ಕೃಷಿ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಲು ಸ್ವಲ್ಪ ಮಟ್ಟಿಗೆ ಸಹಕಾರಿಯಾಗಿದೆ. 1967ರ ಮಾರ್ಚಿಯವರೆಗೆ 42.7 ಲಕ್ಷ ಎಕರೆಗಳನ್ನು ಸಂಗ್ರಹಿಸಿ, 12 ಲಕ್ಷ ಎಕರೆಗಳನ್ನು ಭೂರಹಿತರಲ್ಲಿ ಹಂಚಲಾಗಿದೆ. ಗ್ರಾಮದಾನ ಇದರ ವಿಸ್ತøತ ರೂಪ.		(ಎಸ್.ಎಲ್.ಆರ್.)
										ಪರಿಷ್ಕರಣೆ : ಡಾ. ಟಿ ಎನ್ ಪ್ರಕಾಶ್
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ